‘ಮುತ್ತಿನ ಕೋಟೆ’ಯ ಕಥೆ-ವ್ಯಥೆ

02:55
‘ಮುತ್ತಿನ ಕೋಟೆ’ಯ ಕಥೆ-ವ್ಯಥೆ

ಲಿಂಗಸೂಗೂರು ತಾಲೂಕಿನ ಮುದಗಲ್ಲು ಕೋಟೆ ಕದಂಬರ ರಾಜಧಾನಿಯಾಗಿ ಮೆರೆದ ನಗರ. ಇದು ಮಹ್ಮದ್ ಬಿನ್ ತುಘಲಕ್‌ನ ಆಳ್ವಿಕೆಗೂ ಒಳಪಟ್ಟಿತ್ತು. ನಂತರ ವಿಜಯನಗರ ಅರಸರ ಮತ್ತು ಬಹಮನಿ ಸುಲ್ತಾನರ ಆಡಳಿತಕ್ಕೂ ಒಳಪಟ್ಟಿತ್ತು. ಈ ಕೋಟೆಯ ಮೇಲೆ ಹಿಡಿತ ಸಾಧಿಸಲು ಹದಿಮೂರು ಯುದ್ಧಗಳು ನಡೆದಿವೆ!

ಮುದಗಲ್ಲಾಗಿರಬೇಕ
ಮುತ್ತ ಪೋಣಿಸಬೇಕ
ಉತ್ತತ್ತಿ ಸೀರಿ ಉಡಬೇಕ
ಅಮರಯ್ಯನ ಕೊಂಡ ಮುಣಿಗೇಳಬೇಕ...’
ಜನಪದರ ಬಾಯಲ್ಲಿ ಮುತ್ತು ಪೋಣಿಸುವ ಊರಾಗಿ ಚಾಲ್ತಿಯಲ್ಲಿರುವ ರಾಯಚೂರು ಜಿಲ್ಲೆಯ ಮುದಗಲ್ಲ ಕೋಟೆಯನ್ನು  ನೀವು ನೋಡಿಲ್ಲವಾದರೆ ಒಮ್ಮೆ ನೋಡಬೇಕು. ಕೋಟೆ ನೋಡಲು ಇಡೀ ಒಂದು ದಿನ ಬೇಕಾದೀತು.

ಆಯತಾಕಾರದಲ್ಲಿರುವ ಮುದಗಲ್ಲು ಕೋಟೆಯು ಸುತ್ತ ನಾಲ್ಕೂ ದಿಕ್ಕಿಗೆ ಹರಡಿಕೊಂಡಿರುವ ಎರಡು ಸುತ್ತಿನ ಕೋಟೆ. ಕೋಟೆಯ ದಕ್ಷಿಣ ಭಾಗ ಬೆಟ್ಟದ ಮೇಲಿದ್ದರೆ, ಉಳಿದ ಭಾಗ ಸಮತಟ್ಟಾದ ನೆಲದಮೇಲಿದೆ. ಒಳ ಮತ್ತು ಹೊರ ಕೋಟೆಗಳ ನಡುವಿನ ಅಂತರ ಕಡಿಮೆ ಇದ್ದು ಎರಡೂ ಒಟ್ಟಿಗೆ ಸಾಗುವಂತೆ ಅವುಗಳ ರಚನೆಯಿದೆ. ಶತ್ರುಗಳ ದಾಳಿ ತಡೆಯಲು ನಿರ್ಮಿಸಿದ ಕೋಟೆಯ ಸುತ್ತಲಿನ ಬೃಹತ್ ಕಂದಕಗಳಲ್ಲಿ ಅಗಾಧ ಪ್ರಮಾಣದ ನೀರು ನಿಲ್ಲುವ ಸಾಮರ್ಥ್ಯವಿದೆ.
ಈ ಕೋಟೆಯನ್ನು ಕಟ್ಟಿಸಿದವರು ವಿಜಯನಗರದ ಅರಸರು. ಅದರ ರಿಪೇರಿ ಮಾಡಿ ಹೊರಗೋಡೆ ನಿರ್ಮಿಸಿದವರು ಬಿಜಾಪುರದ ಆದಿಲ್‌ಶಾಹಿಗಳು!

ಕೋಟೆ ಹಿಂದೂ-ಮುಸ್ಲಿಂ ಸಾಮರಸ್ಯದ ಸಂಕೇತ ಎನ್ನುವುದಕ್ಕೆ ಸಾಕ್ಷಿಯಾದ ಹಲವು ಸಂಗತಿಗಳು ಇಲ್ಲಿವೆ. ಒಳಗೋಡೆಗಳಲ್ಲಿ ಇಪ್ಪತ್ತನಾಲ್ಕು ಹಿಂದೂ ಶೈಲಿಯ ಚೌಕಾಕಾರದ ಕೊತ್ತಲಗಳಿದ್ದರೆ, ಇಪ್ಪತ್ತೈದು ಮುಸ್ಲಿಂ ಶೈಲಿಯ ವೃತ್ತಾಕಾರದ ಕೊತ್ತಲಗಳಿವೆ. ಇಲ್ಲಿ ಲಭ್ಯವಿರುವ 80 ಶಾಸನಗಳ ಪೈಕಿ ಕೆಲವು ವಿಜಯನಗರದ ಅರಸರ ಕಾಲದವು. ಮಿಕ್ಕವು ಮುಸ್ಲಿಂ ಅರಸರವು. ಒಂದೆಡೆ ರಣರಂಗ ಭೈರವನ ಕೊತ್ತಳ. ಮತ್ತೊಂದೆಡೆ ಫತೇಜಂಗ್ ಮತ್ತು ಅಲಿ ಬುರುಜುಗಳಿವೆ.

ರಾಮಲಿಂಗೇಶ್ವರ, ಆಂಜನೇಯ, ಗಣೇಶ, ನಗರೇಶ್ವರ ದೇವಾಲಯ ಗಳಿರುವಂತೆ ಹುಸೇನ್ ಆಲಂ ದರ್ಗಾ, ನಾನಾ ದರ್ಗಾ, ರಹೆಮಾನ್ ದರ್ಗಾ ಮತ್ತು ಜಾಮಿಯಾ ಮಸೀದಿಗಳಿವೆ. ಮುದಗಲ್‌ನ ಮೊಹರಂ ಹಬ್ಬ ಹಿಂದು-ಮುಸ್ಲಿಂ ಭಾವೈಕ್ಯಕ್ಕೆ ದೊಡ್ಡ ಉದಾಹರಣೆ. ಹಬ್ಬದ ಸಂದರ್ಭದಲ್ಲಿ   ಮೊಹರಂ ಪದಗಳ ಗುಂಜಾರವ ಇಡೀ ಮುದಗಲ್ ಶಹರವನ್ನು ಅತ್ತರಿನ ಕಂಪಿನಂತೆ ಆವರಿಸಿಕೊಳ್ಳುತ್ತದೆ!

ಅಂದುಳ್ಳ ಮುದಗಲ್ಲ
ಚಂದುಳ್ಳ ಬಾಜಾರದಾಗ
ಗುಂಗಿ ಆಡ್ಯಾವ ಗಗನಕ
ನಮ್ಮ ಹಸನ್ ಹುಸೇನ್ ಆಲಂ ದಫನದಾಗ
ಎಂಬಂಥ ಹಾಡುಗಳು ಜನರ ನಾಲಿಗೆ ಮೇಲೆ ನಲಿದಾಡುತ್ತವೆ.

ಮುಳ್ಳಗಸಿ ಬಾಗಿಲು!
ಫತೇ ದರ್ವಾಜ (ವಿಜಯದ ಬಾಗಿಲು) ಮತ್ತು ಕಾಟೇದರ್ವಾಜ (ಮುಳ್ಳಗಸಿ ಬಾಗಿಲು)ಗಳೆಂಬ ಎರಡು ದೊಡ್ಡ ಬಾಗಿಲುಗಳು ಈ ಕೋಟೆಗಿದ್ದು ಮುಳ್ಳಗಸಿ ಬಾಗಿಲ ರಚನೆ ಅದ್ಭುತವಾಗಿದೆ. ಈ ಬಾಗಿಲಿನ ಎರಡೂ ಕದಗಳ ಮೇಲೆ ಅತ್ಯಂತ ಚೂಪಾದ ಉಕ್ಕಿನ ಮೊಳೆಗಳಿವೆ. ಶತ್ರುಗಳು ಬಾಗಿಲು ತೆಗೆಯಲು ಆನೆಗಳನ್ನು ಬಳಸಿದರೆ ಮುಳ್ಳುಗಳು ಆನೆ ತಲೆಗೆ ಚುಚ್ಚುವಂತೆ ಈ ರಚನೆಗಳಿವೆ.

ಸದ್ಯಕ್ಕೆ  ಕೋಟೆಯಲ್ಲಿ ನಾಲ್ಕು ತೋಪುಗಳು ನೋಡಲು ಸಿಗುತ್ತವೆ. ಅವುಗಳ ಪೈಕಿ ಅಲಿಬುರುಜಿನ ಮೇಲಿರುವ ತೋಪು ಅತಿ ದೊಡ್ಡದು. ತುಪ್ಪದ ಕೊಳ, ವ್ಯಾಯಾಮ ಶಾಲೆ, ಗಜ ಶಾಲೆಗಳೂ ಇದ್ದು, ಗಜಶಾಲೆ ಈಗ  ಪ್ರಾಥಮಿಕ ಶಾಲೆಯಾಗಿದೆ.

ಮುದಗಲ್ಲಿನ ಇತಿಹಾಸ
ಈಗ ಲಿಂಗಸೂಗೂರು ತಾಲೂಕಿನ ಒಂದು ಪಟ್ಟಣವಾಗಿರುವ ಮುದಗಲ್‌ ಒಂದು ಕಾಲಕ್ಕೆ ಕದಂಬರ ಅರಸ ಬಿಜ್ಜರಸನ ರಾಜಧಾನಿಯಾಗಿ ಮೆರೆದ ನಗರ. ಈ ಕುರಿತು ಉಪಲಬ್ಧವಿರುವ ಅತಿ ಪ್ರಾಚೀನ ಪುರಾವೆಯೆಂದರೆ ಕ್ರಿ.ಶ.150ರಲ್ಲಿ ಪ್ರಸಿದ್ಧ ಗೀಕ್ ಪ್ರವಾಸಿ ಟಾಲೆಮಿಯ ‘ಇಂಡಿಯನ್ ಜಿಯಾಗ್ರಫಿ’ ಕೃತಿ. ಇದರಲ್ಲಿ ಮುದಗಲ್ಲು ‘ಮೊಡೋಗಲ್ಲು’ ಎಂದು ಉಲ್ಲೇಖಗೊಂಡಿದೆ. ಮುದಗಲ್ಲಿನಲ್ಲಿರುವ ಅತಿ ಪ್ರಾಚೀನ ಶಾಸನವೆಂದರೆ ಕ್ರಿ.ಶ 1048ರ ಕಾಲದ ಕಲ್ಯಾಣಿ ಚಾಲುಕ್ಯರ ಶಾಸನ. ನಂತರದ ಕಾಲಘಟ್ಟದಲ್ಲಿ ಕದಂಬರ ರಾಜಧಾನಿ ಆಯ್ತು. ಕ್ರಿ.ಶ 1327ರಲ್ಲಿ ಮಹ್ಮದ್ ಬಿನ್ ತುಘಲಕ್‌ನ ಆಳ್ವಿಕೆಗೆ ಒಳಪಟ್ಟಿತ್ತು. ನಂತರ ಕೆಲಕಾಲ ವಿಜಯನಗರ ಅರಸರ ಆಳ್ವಿಕೆಗೆ ಮತ್ತೆ ಕೆಲಕಾಲ ಬಹಮನಿ ಸುಲ್ತಾನರ ಆಳ್ವಿಕೆಗೂ ಒಳಪಟ್ಟಿತ್ತು. ಈ ಎರಡು ರಾಜಮನೆತನಗಳಿಗಂತೂ  ಮುದಗಲ್ಲಿನ ಒಡೆತನ ಒಂದು ಪ್ರತಿಷ್ಠೆಯ ಪ್ರಶ್ನೆಯಾಗಿತ್ತು. ಇದಕ್ಕಾಗಿ ಈ ಎರಡೂ ರಾಜ್ಯಗಳ ನಡುವೆ  ಹದಿಮೂರು ಸಲ ಯುದ್ಧಗಳು ನಡೆದಿವೆ! ಒಂದು ಯುದ್ಧವಂತೂ ಮುದಗಲ್ಲು ನಿವಾಸಿಯಾದ ಒಬ್ಬ ಸುಂದರ ಅಕ್ಕಸಾಲಿಗರ ಯುವತಿಯ ಕಾರಣಕ್ಕಾಗಿ ನಡೆದಿದೆ!!

ಸೂಕ್ತ ದೇಖರೇಖಿಯಿಲ್ಲದೆ ನಾಶದಂಚಿಗೆ ತಲುಪಿರುವ ಈ ಬೃಹತ್ ಕೋಟೆಯ ಮೇಲ್ಭಾಗದಲ್ಲಿ ಮುಳ್ಳಿನ ಗಿಡಗಳು ಬೆಳೆದುನಿಂತಿವೆ. ಕೋಟೆಯ ಗೋಡೆ ಅಲ್ಲಲ್ಲಿ ಕುಸಿದು ಶಿಥಿಲಗೊಂಡಿದೆ. ಮುಳ್ಳಗಸಿಯ ಬಾಗಿಲು ಕಿತ್ತುಹೋಗಿದ್ದರೆ ಬುರುಜುಗಳು ನೆಲಕ್ಕುರುಳಿವೆ. ಹೊಕ್ರಾಣಿ ಪಾಳು ಬಿದ್ದಿದೆ. ಕೋಟೆ ಆವರಣ ಬಯಲು ಶೌಚಾಲಯವಾಗಿದೆ. ಹೊರಭಾಗದ ಕಂದಕಗಳು ತಿಪ್ಪೆಗಳಾಗಿ ಕ್ರಮೇಣ ಮುಚ್ಚಿಹೋಗುವ ಅಪಾಯದಲ್ಲಿವೆ.

ಭವ್ಯ ಪರಂಪರೆಯ ಮುದಗಲ್ಲಿನ ಹೆಸರಿನಲ್ಲಿ ಸರ್ಕಾರ ಪ್ರತಿ ವರ್ಷ ಉತ್ಸವವೊಂದನ್ನು ಮಾಡುವ ಮೂಲಕ ಕೋಟೆಗೆ ಕಾಯಕಲ್ಪ ನೀಡಲೆಂದು ಸರ್ಕಾರಕ್ಕೆ ಸಲ್ಲಿಸಿದ ಬೇಡಿಕೆಯು ಕಡತದಲ್ಲೇ ಉಳಿದಿದೆ. ಇದು  ಅತ್ಯಂತ ವಿಷಾದದ ಸಂಗತಿ ಎನ್ನುತ್ತಾರೆ ಇಲ್ಲಿಯ ಉದ್ಯಮಿ ಮತ್ತು ಕೋಟೆಯ ಹಿತಾಸಕ್ತ ಗುರುಬಸಪ್ಪ ಸಜ್ಜನ್.

ಸ್ಥಳೀಯ ಪಟ್ಟಣ  ಪಂಚಾಯಿತಿ  ಜಿಲ್ಲಾಡಳಿತ, ಪ್ರಾಚ್ಯ ಮತ್ತು ಪುರಾತತ್ವ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆಗಳು ಮುದಗಲ್ಲನ್ನು ಒಂದು ಪ್ರಮುಖ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಿದರೆ  ಮುದಗಲ್ಲು ಮುಂದಿನ ಪೀಳಿಗೆಯವರಿಗೆ ನೋಡಲು ಉಳಿದೀತು.    

0 comments:

Post a Comment

Total Pageviews

Recent Posts

Find us on Facebook