೪. ಗುಂತಗೋಳ ಬೇಡ ಪಾಳೆಯಗಾರರು
ರಾಯಚೂರು ಜಿಲ್ಲೆಯ ಲಿಂಗಸುಗೂರ ತಾಲ್ಲೂಕಿನಿಂದ ಸುಮಾರು ೩೦ ಕಿ.ಮೀ. ಅಂತರದಲ್ಲಿರುವುದೇ
ಗುಂತಗೋಳ. ಇಲ್ಲಿ ಒಂದು ಬೇಡ ಪಾಳೆಯಗಾರರ ಮನೆತನವಿತ್ತು. ಈ ಮನೆತನದವರು ಮೂಲತಃ
ಕಂಚಿಯಿಂದ ಬಂದವರು. ನಂತರ ಇವರು ಬಿಜಾಪುರದ ಆದಿಲ್‌ಶಾಹಿಗಳ ಆಡಳಿತಾವಧಿ (ಕ್ರಿ. ಶ.
೧೪೪೯-೧೬೮೬) ಯಲ್ಲಿ ನಿರ್ಲಕ್ಷಿಸಲ್ಪಟ್ಟ ಪ್ರದೇಶದಲ್ಲಿ ಒಂದು ಸಂಸ್ಥಾನವನ್ನು
ಸ್ಥಾಪಿಸಿದರು. ಇವರು ಬ್ರಿಟಿಷ್ ಮತ್ತು ಹೈದ್ರಾಬಾದ್ ನಿಜಾಮ (ಕ್ರಿ.ಶ. ೧೭೨೪-೧೯೪೮)ರ
ದಬ್ಬಾಳಿಕೆಯ ಮಧ್ಯೆ ಸಮರ್ಥವಾಗಿ ಆಳ್ವಿಕೆ ನಡೆಸಿದುದು ವಿಶೇಷವಾಗಿದೆ.
ಗುಂತಗೋಳ ಬೇಡ ಪಾಳೆಯಗಾರರು ಮೊದಲಿಗೆ ಬಿಜಾಪುರದ ಆದಿಲ್‌ಶಾಹಿಗಳ ಅಧೀನರಾಗಿದ್ದರು.
ಆದಿಲ್‌ಶಾಹಿಗಳು ತಮ್ಮ ಸಾಮಂತರಿಗೆ ಜಹಗೀರು ಹಾಕಿಕೊಡುತ್ತಿದ್ದರು. ಹೀಗಾಗಿ ಇವರಿಗೆ
ಮೊದಲು ಜಹಗೀರುಗಳನ್ನು ಹಾಕಿದ್ದರು. ನಂತರ ಔರಂಗಜೇಬನನು ಬಿಜಾಪುರವನ್ನು ಮುತ್ತಿ
ಸಿಕಂದರವನನ್ನು ಸೆರೆಹಿಡಿದು ಆದಿಲ್‌ಶಾಹಿಗಳ ಆಳ್ವಿಕೆಯನ್ನು ಸಮಾಪ್ತಿಗೊಳಿಸಿದ ಮೇಲೆ
ಇವರು ಸ್ವತಂತ್ರವಾಗಿ ಆಳ್ವಿಕೆ ಮಾಡಿದರು. ಇವರು ಮೊದಲ ರಾಜಧಾನಿ ಜಲದುರ್ಗ, ನಂತರ
ಗುಂತಗೋಳಕ್ಕೆ ಬಂದು ಅದನ್ನು ತಮ್ಮ ರಾಜಧಾನಿಯನ್ನಾಗಿ ಮಾಡಿಕೊಂಡರು. ಗುಂತಗೋಳ ಸಂಸ್ಥಾನದ
ಮೂಲಪುರುಷ ಕಾಳಭೈರವನಾಯಕ. ಈತನ ಸಮಾಧಿ ಗುಂತಗೋಳದಲ್ಲಿದೆ. ಗುಂತಗೋಳದ ನಾಯಕ ಅರಸರಲ್ಲಿ
ರಾಜಾಅಮರಪ್ಪ ನಾಯಕ, ರಾಜಾರಾಮಪ್ಪನಾಯಕ, ರಾಜಾಇಮ್ಮಡಿ ಅಮರಪ್ಪನಾಯಕ, ರಾಜಾಶ್ರೀನೀವಾಸ
ನಾಯಕ, ರಾಜಾಇಮ್ಮಡಿ ಬಸಪ್ಪವಾಯಕ, ರಾಜಾರಾಮಪ್ಪನಾಯಕ, ರಾಜಾ ಮುಮ್ಮಡಿ ಅಮರಪ್ಪನಾಯಕ,
ರಾಜಾಇಮ್ಮಡಿ ರಾಯಪ್ಪನಾಯಕ, ರಾಜಾ ನರಸಿಂಹನಾಯಕ ಇವರುಗಳು ಪ್ರಮುಖರಾಗಿದ್ರದಾರೆ.
ಈ ಸಂಸ್ಥಾನದ ಪಾಳೆಯಗಾರರಿಗೆ ‘ಬಹರಿ ಬಹದ್ದೂರ್’, ‘ನಾಯಕಾಚಾರ್ಯ’, ‘ಮಹಾನಾಯಕ’,
‘ದೊರೆ’ ಎಂಬ ಬಿರುದಗಳಿವೆ. ಇವರಿಗೆ ಆದಿಲ್‌ಶಾಹಿಗಳು ‘ಬಹರಿಬಹ ದ್ದೂರ್’ ಎಂಬ ಬಿರುದು
ನೀಡಿ ಗೌರವಿಸಿದ್ದಾರೆ. ಈ ಸಂಸ್ಥಾನಿಕರ ರಾಜಲಾಂಛನ ಆನೆ, ಹಸಿರು ಬಣ್ಣದ ಧ್ವಜವಿದೆ.
ಶೈವಪಂಥದವರಾದ ಇವರು ಭಾರಧ್ವಜಗೋತ್ರದವರು. ಇವರ ಆಡಳಿತಕ್ಕೆ ಸುಮಾರು ೧೩೦ ಹಳ್ಳಿಗಳು
ಸೇರಿದ್ದು ಇವರ ಗಡಿಯನ್ನು ಸೂಚಿಸುವ ಜನಪದ ನುಡಿಯೊಂದು ಇಂತಿದೆ:
ಮಾಮಲೆ ಮುದಗಲ್ಲ, ಕಿಲ್ಲೆ ಜಲದುರ್ಗ
ಸಮತ್‌ಗೋನವಾಟ್ಲ, ಸಂಸ್ಥಾನ | ಗುಂತಗೋಳ
ನಮ್ಮರಾಜರದು.
ಇವರ ಆಡಳಿತ ವ್ಯವಸ್ಥೆಯಲ್ಲಿ ಪಾಟೀಲ, ಕುಲಕರ್ಣಿ, ನಾಡಗೌಡ, ದೇಸಾಯಿ, ಪೋಲೀಸ್ ಪಾಟೀಲ್ ಎಂಬ ಅಧಿಕಾರಿಗಳಿದ್ದರು. ಇವರಲ್ಲಿ ಕಾಳಾಪುರದ ದಣಿಗಳು, ನೀರಲಕೇರಿಯ ನಾಡಗೌಡರು, ಬೆಲ್ಲದಮರಡಿಯ ದೇಸಾಯಿಗಳು ಪ್ರಮುಖರಾದವರು.
ಇವರು ತಮ್ಮ ಭಾಗದ ಕಂದಾಯವನ್ನು ವಸೂಲಿ ಮಾಡಿ ಗುಂತಗೋಳದ ಅರಸರಿಗೆ ಸಲ್ಲಿಸುತ್ತಿದ್ದರು.
ಗುಂತಗೋಳದ ಅರಸರು ಹೈದ್ರಾಬಾದ್ ನಿಜಾಮನಿಗೆ ವಾರ್ಷಿಕ ಕಪ್ಪಕಾಣಿಕೆ ಯನ್ನು
ಸಲ್ಲಿಸುತ್ತಿದ್ದರು.
ಈ ಸಂಸ್ಥಾನದ ಕಾವಲುಗಾರನ ಹೆಂಡತಿ ಮಾಳಗುಂಡಮ್ಮಳೆಂಬ ಮಹಿಳೆ ಸಂಸ್ಥಾನದ ರಕ್ಷಣೆಗಾಗಿ
ಒಲವಿನ ಪುರುಷನಾಗಿದ್ದನು. ದುರ್ಬಾರಿನಲ್ಲಿ ಪ್ರತಿವರ್ಷ ನವರಾತ್ರಿ ಸಮಯದಲ್ಲಿ ನಡೆಯುವ
ದೇವಿಪುರಾಣವನ್ನು ಸ್ವತಃ ತಾವೇ ಪಾರಾಯಣ ಮಾಡುತ್ತಿದ್ದರು. ಈ ಸಂಸ್ಥಾನಿಕರು ಸುರಪುರ,
ದೇವದುರ್ಗ, ಗುಡಗುಂಟಿ, ಕನಕಗಿರಿ ಗುಡೇಕೋಟೆ, ರತ್ನಗಿರಿ, ಮನೆತನಗಳೊಂದಿಗೆ ವೈವಾಹಿಕ
ಸಂಬಂಧವನ್ನು ಬೇಳೆಸಿದ್ದಾರೆ.
ಇವರು ಕುಲದೇವರು ಕಂಚಿಯ ಏಕ ಅಮರೇಶ್ವರ. ಈ ಕುಲದೇವರ ಹೆಸರಿನಲ್ಲಿ ಗುಂತಗೋಳದಲ್ಲಿ
ಅಮರೇಶ್ವರ ದೇವಾಲಯವನ್ನು ಕಟ್ಟಿಸಿದ್ದಾರೆ. ನಂತರ ದೇವರ ಭೂಪೂರದ ಶ್ರೀ ಅಮರೇಶ್ವರ ಇವರ
ಮನೆದೇವರಾಯಿತು. ಇಲ್ಲಿ ಪ್ರತಿವರ್ಷ ಫಾಲ್ಗುಣ ಶುದ್ಧ ತ್ರಯೋದಶಿಯಂದು ಈ ದೆವರ ಜಾತ್ರೆ
ನಡೆಯುತ್ತದೆ. ಈ ತೇರಿಗೆ ಕಳಸವು ಗುಂತಗೋಳ ಸಂಸ್ಥಾನಿಕರಿಂದಲೇ ಬರುತ್ತದೆ.
ಈ ಪಾಳೆಯಗಾರರ ಆರಾಧ್ಯ ದೇವರುಗಳ ಗೋನವಾಟ್ಲದ ವೇಣುಗೋಪಾಲಸ್ವಾಮಿ, ಭುವನೇಶ್ವರಿ,
ಕಕ್ಕೇರಿಯ ಸೋಮನಾಥ, ಹನುಮಾನ ಪ್ರಮುಖರಾದವರು. ಗುಂತಗೋಳ ಸಂಸ್ಥಾನದ ರಾಜಗುರುಗಳು ದೇವರ
ಭೂಪೂರದ ಶ್ರೀಗಜದಂಡ ಮಹಾಸ್ವಾಮಿಗಳು, ಅಲ್ಲದೇ ಶ್ರೀ ಚಿತ್ತರಗಿ ಇಲಕಲ್ ಮಹಾಂತಸ್ವಾಮಿಗಳ
ಮಠ, ಶ್ರೀಕಿದ್‌ಮತಿ ಮಠ, ಶ್ರೀ ಪಂಚಾಕ್ಷರಿ ಮಠಗಳಿಗೆ ಭಕ್ತರಾಗಿದ್ದರು. ಈ ಮಠಗಳೆಲ್ಲ
ಒಂದೊಂದು ಜನಪರಕಾರ್ಯಗಳನ್ನು ಮಾಡುತ್ತಿದ್ದವು. ಇವುಗಳಿಗೆಲ್ಲ ಈ ಪಾಳೆಯಗಾರರು ಇನಾಮು
ಭೂಮಿಗಳನ್ನು ನೀಡಿದ್ದಾರೆ. ಇಂದಿಗೂ ಈ ಸಂಸ್ಥಾನದ ಮಹಾನವಮಿ, ದೀಪಾವಳಿ, ಯುಗಾದಿ ಮೊಹರಂ,
ಶಿವರಾತ್ರಿ ಮುಂತಾದ ಹಬ್ಬಹರಿದಿಗಳನ್ನು ಆಚರಿಸುತ್ತಾರೆ. ಅಂದು ಅನೇಕ ಸ್ಪರ್ಧೆಗಳನ್ನು
ಏರ್ಪಡಿಸಿ ವಿಜೇತರಿಗೆ ಬಹುಮಾನಗಳನ್ನು ವಿತರಿಸುವ ಸತ್ಸಂಪ್ರದಾಯ ಇಂದಿಗೂ ಇದೆ. ಇವರು
ಅಮರೇಶ್ವರ ಗೋನನಾಟ್ಲದ ಗೋಪೋಲಸ್ವಾಮಿ, ಮಾಳಗುಂಡಮ್ಮ, ವೀರಯೋಧ, ಕಾಳಭೈರವನಾಯಕತ,
ಗಂಗಪ್ಪಯ್ಯ ಮುಂತಾದ ದೇವಾಲಯಗಳನ್ನು ನಿರ್ಮಿಸಿದ್ದಾರೆ. ಲಿಂಗಸೂಗೂರು ತಾಲೂಕಿನಲ್ಲೆಯೇ
ಗುಂತಗೋಳ ಭಾಗದಲ್ಲಿ ನಮಗೆ ಅತಿ ಹೆಚ್ಚು ವೀರಗಲ್ಲುಗಳು ಸಿಗುತ್ತವೆ.
ಈ ಮನೆತನದ ವಂಶಸ್ಥರು ರಾಜಕೀಯದೊಂದಿಗೆ ಉತ್ತಮ ಸಂಬಂಧವನ್ನು ಹೊಂದಿ ದ್ದಾರೆ.
ರಾಜಾಅಮರೇಶ್ವರನಾಯಕನು ೧೯೮೯ರಲ್ಲಿ ಲಿಂಗಸುಗೂರು ವಿಧಾನ ಸಭಾಕ್ಷೇತ್ರ ದಿಂದ, ನಂತರ ಇದೇ
ಕ್ಷೇತ್ರದಿಂದ ೧೯೯೪ರಲ್ಲಿ ವಿಧಾನಸಭೆಗೆ ಸ್ಪರ್ಧಿಸಿ ಧಾರ್ಮಿಕ ಮತ್ತು ದತ್ತಿ ಖಾತೆಯ
ಸಚಿವರಾಗಿದ್ದರು. ೧೯೯೯ರಲ್ಲಿ ಕಲ್ಮಲಾ ಕ್ಷೇತ್ರದಿಂದ ಆಯ್ಕೆಯಾಗಿ, ರಾಜ್ಯ ತೋಟಗಾರಿಕೆ
ಸಚಿವರಾಗಿ, ನಂತರ ಬಂದಿಖಾನೆ, ಗೃಹರಕ್ಷಕ ದಳ ಮತ್ತು ಕಾನೂನು ಮಾಪನ ಸಚಿವರಾಗಿ
ಸೇವೆಯಯನ್ನು ಸಲ್ಲಿಸಿದ್ದಾರೆ. ಇವರ ಹಿರಿಯಸಹೋದರ ರಾಜಾ ರಾಯಪ್ಪನಾಯಕರು, ಮಾಜಿ ಜಿಲ್ಲಾ
ಪಂಚಾಯತ್ ಸದಸ್ಯರಾಗಿದ್ದು, ಇಂದು ರಾಜಕೀಯದಲ್ಲಿ ಗುರುತಿಸಿಕೊಂಡಿದ್ದಾರೆ. ಇವರ ಕಿರಿಯ
ಸಹೋದರರಾದ ರಾಜಾ ಶ್ರೀನಿವಾಸನಾಯಕರು ಸದ್ಯ ರಾಯಚೂರು ಜಿಲ್ಲಾ ಪಂಚಾಯತಿಯ
ಸದಸ್ಯರಾಗಿದ್ದಾರೆ. ಅನೇಕ ಜನೋಪಯೋಗಿ ಕೆಲಸ ಕಾರ್ಯಗಳಲ್ಲಿ ತಮ್ಮನ್ನು ತಾವು
ತೊಡಗಿಸಿಕೊಂಡಿದ್ದಾರೆ.
೫. ದೇವದುರ್ಗದ ಬೇಡ ಪಾಳೆಯಗಾರರು
ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕು ಬೇಡ ಪಾಳೆಯಗಾರರ ಸಂಸ್ಥಾನ ವಾಗಿತ್ತು. ಈ
ಮನೆತನದ ಮೂಲಪುರಷ ಸೋಮಜಂಪಲ ಭೂಮಿಪತಿ ರಂಗಪ್ಪನಾಯಕ. ಆದರೆ ಈ ಮನೆತನದ ಸಂಸ್ಥಾಪಕ
ವಾಸುದೇವನಾಯಕ. ಈತ ಚಂದನಕೇರಿ ಮತ್ತು ದೇವದುರ್ಗದಲ್ಲಿ ಆಳ್ವಿಕೆಯನ್ನು ಪ್ರಾರಂಭಿಸಿದನು.
ಚಂದನಕೇರಿ ಈತನ ಮೊದಲ ರಾಜಧಾನಿ ಯಾಯಿತು. ನಂತರ ತನ್ನ ರಾಜಧಾನಿಯನ್ನು ದೇವದುರ್ಗಕ್ಕೆ
ವರ್ಗಾಯಿಸಿದನು. ಆಗ ದೇವದುರ್ಗದ ಅಧೀನದಲ್ಲಿದ್ದ ಏಳು ಪ್ರಮುಖ ಗ್ರಾಮಗಳಿಗೆ ತನ್ನ ಐದು
ಜನ ಮಕ್ಕಳನ್ನು ನೇಮಿಸುತ್ತಾನೆ. ದೇವದುರ್ಗವನ್ನು ತನ್ನ ಅಧೀನದಲ್ಲಿಯೇ
ಇಟ್ಟಕೊಳ್ಳತ್ತಾನೆ. ಹಾಗೂ ತನ್ನೊಂದಿಗೆ ತನ್ನ ಹಿರಿಯ ಮಗ ಕಿಲಚನಾಯಕನನ್ನು
ಉಳಿಸಿಕೊಳ್ಳುತ್ತಾನೆ. ಸಣ್ಣಕಿಲಚ ನಾಯಕನನ್ನು ಅರಕೇರಿಗೆ, ವೆಂಕಟಪ್ಪನಾಯಕನನ್ನು
ಮುಂಡರಗಿಗೆ, ವಾಸುದೇವನಾಯಕನನ್ನು ಜಾಲಹಳ್ಳಿಗೆ, ಕೃಷ್ಣಪ್ಪನಾಯಕನನ್ನು ರಾಮದುರ್ಗಕ್ಕೆ,
ರಂಗಪ್ಪನಾಯಕನನ್ನು ಕ್ಯಾದಿಗ್ಗೇರಿಗೆ, ತಿಮ್ಮಪ್ಪನಾಯಕನನ್ನು ಗಲಗಿಗೆ ಕಳುಹಿಸುತ್ತಾನೆ.
ಔರಂಗಜೇಬನು ಕ್ರಿ.ಶ. ೧೭೦೫ರಲ್ಲಿ ಸುರಪುರದ ವಾಗಿನಗೇರಿಯನ್ನು ಮುತ್ತಿಗೆ ಹಾಕಿದಾಗ
ಔರಂಗಜೇಬನ ಜೊತೆಗೆ ದೇವದುರ್ಗದ ವಾಸುದೇವನಾಯಕನಿದ್ದನು. ಸುರಪುರದ ಪಿಡ್ಡನಾಯಕನನ್ನು
ಜಯಿಸುವಲ್ಲಿ ಮೊಘಲ್‌ರಿಗೆ ಸಹಾಯ ಮಾಡಿದ್ದಕ್ಕಾಗಿ, ಈತನಿಗೆ ‘ಶಾಹ ಆಲಮ’ನು
ವಾಸುದೇವನಾಯಕನಿಗೆ ರಾಯಚೂರು ಪ್ರಾಂತ್ಯದ ಜಮೀನ್ದಾರಿಕೆಯನ್ನು ತಾನು ಪಟ್ಟವೇರಿದ ಮೂರನೇ
ವರ್ಷದಲ್ಲಿ ನೀಡುತ್ತಾನೆ. ವಾಸುದೇವನಾಯಕನ ತರುವಾಯ ಈತನ ಹಿರಿಯ ಮಗ ಕಿಲಚನಾಯಕನು ಅಧಿಕಾರ
ಸ್ವೀಕರಿಸುತ್ತಾನೆ. ಆಗ ಸುರಪುರ ಹಾಗೂ ಗುಡಗುಂಟಿ ಅರಸರಿಗೆ ಮನಸ್ತಾಪವಾಗುತ್ತದೆ.
ಜೊತೆಗೆ ಸುರಪುರದ ಬಂಡಡುಕೋರರು ತಮ್ಮ ಅರಸ ಮೊಂಡಗೈ ವೆಂಕಟಪ್ಪನಾಯಕನನ್ನು
ಸೆರೆಯಲ್ಲಿಡುತ್ತಾರೆ. ದೇವದುರ್ಗದ ಕಿಲಚನಾಯಕನು ಸುರಪುರದ ಮೂರುಕೇರಿಯ ಬೇಡರನ್ನು
ಒಟ್ಟುಕೂಡಿಸಿ, ಅರಸನನ್ನು ಬಿಡುಗಡೆ ಮಾಡಿಸುತ್ತಾನೆ.
ಕೆಲವು ದಿನಗಳ ನಂತರ ದೇವದುರ್ಗದ ಅರಸ ಕಿಲಚನಾಯಕನು ಕ್ಯಾದಿಗೇರಿಯ ಮೇಲೆ ದಾಳಿ
ಮಾಡುತ್ತಾನೆ. ಈತನ ನಂತರ ಚಿಕ್ಕಕೇಶವನಾಯಕ ದೇವದುರ್ಗದ ಅರಸನಾದ. ಈತನ ಅಧಿಕಾರವಧಿಯಲ್ಲಿ ಈ
ಸಂಸ್ಥಾನದ ವಾರ್ಷಿಕ ಆದಾಯ ಮೂರುಲಕ್ಷ ರೂಪಾಯಿಗಳಾಗಿದ್ದಿತು. ಈತನು ವಾರಕ್ಕೊಮ್ಮೆ
ದೇವದುರ್ಗದಲ್ಲಿ ಸಂತೆ ನಡೆಯುವಂತೆ ಮಾಡಿದನಲ್ಲದೆ, ಆಗ ನಿಜಾಂಪೇಟೆ, ಸತ್ಯಂಪೇಟೆ, ಕೋಟೆ
ಪ್ರದೇಶಗಳನ್ನು ಕಟ್ಟಿಸುತ್ತಾನೆ. ಈತನ ಅವಧಿಯಲ್ಲಿ ಕ್ರಿ.ಶ. ೧೭೬೬ರಲ್ಲಿ ಹೈದ್ರಾಬಾದ್
ಮೇಲೆ ದಂಡಯಾತ್ರೆ ಹೊರಟ ಪೇಶ್ವೆ ಮತ್ತು ನಿಜಾಮನ ಉಭಯ ಪಡೆಗಳು ದೇವದುರ್ಗದಲ್ಲಿ
ಬೀಡುಬಿಟ್ಟವು. ಈತನ ತರುವಾಯ ಕೊಳ್ಳಿರಂಗಪ್ಪನಾಯಕ ಅಧಿಕಾರ ಸ್ವೀಕರಿಸಿರದ. ಈತ
ದೇವದುರ್ಗದ ಪ್ರಸಿದ್ಧ ಅರಸನಾಗಿದ್ದು, ಅನೇಕ ಜನೋಪಯೋಗಿ ಕೆಲಸಗಳನ್ನು ಮಾಡಿದ್ದಾನೆ.
ಸುರಪುರರದ ಇಮ್ಮಡಿ ವೆಂಕಟಪ್ಪನಾಯಕ ದಂಡಿನ ಮುಖ್ಯಸ್ಥರನ್ನು ನೇಮಕಮಾಡಿ ದೇವದುರ್ಗದ
ರಂಗಪ್ಪನಾಯಯಕನನ್ನು ಸೆರೆಹಿಡಿದು ತರಬೇಕೆಂದು ಆಜ್ಞೆ ಮಾಡುತ್ತಾನೆ. ರಂಗಪ್ಪನಾಯಕ
ತಲೆಮರೆಸಿಕೊಂಡನು. ದೇವದುರ್ಗದ ಬೆಟ್ಟದ ಪೂರ್ವಕ್ಕಿದ್ದ ಮದ್ದಿನ ಮನೆಯಲ್ಲಿ
ಅಡಗಿಕುಳಿತು, ತನ್ನ ಕೈಯಲ್ಲಿದ್ದ ಕೊಳ್ಳಿಯಿಂದ ಸಿಡಿಮದ್ದಿಗೆ ಬೆಂಕಿಹಚ್ಚಿಕೊಂಡನು.
ತಾನೂ ತನ್ನ ಪರಿವಾರವು ಹಾಗೂ ಈತನನ್ನು ಬೆನ್ನಟ್ಟಿದ ಸುರಪುರದ ಸೈನ್ಯವೂ ಸಿಡಿಮದ್ದಿಗೆ
ಆಹುತಿಯಾಯಿತು. ಈ ಘಟನೆಯಿಂದ ಈತನಿಗೆ ‘ಕೊಳ್ಳಿರಂಗಪ್ಪನಾಯಕ’ನೆಂಬ ಹೆಸರು
ಪ್ರಾಪ್ತವಾಯಿತು. ನಂತರ ಈತನ ಮಗ ಕೃಷ್ಣಪ್ಪನಾಯಕನೆಂಬುವನು ದೇವದುರ್ಗದ ಪಾಳೆಯಗಾರನಾದ.
ಅಷ್ಟೊತ್ತಿಗೆ ಬ್ರಿಟಿಷರು ಈ ಸಂಸ್ಥಾನವನ್ನೆಲ್ಲಾ ಆಕ್ರಮಿಸಿಕೊಂಡರು.
ಈ ಪಾಳೆಯಗಾರರ ಮನೆದೇವರು ಮಾನಸಗಲ್ಲ ರಂಗನಾಥ. ರಂಗನಾಥ ಪ್ರತಿವರ್ಷ ಅಗಿ ಹುಣ್ಣಿಮೆಗೆ
ಈ ಜಾತ್ರೆ ಜರುಗುತ್ತದೆ. ಅರಸರ ಸಮ್ಮುಖದಲ್ಲಿ ಸರ್ವಜನಾಂಗದವರು ಭಾಗವಹಿಸಿ, ತೇರನ್ನು
ಎಳೆಯುವುದು ವಿಶೇಷ. ಈ ಮನೆತನದವರು ಅನೇಕ ಮಠಗಳಿಗೂ ದಾನದತ್ತಿಯನ್ನು ನೀಡಿದ್ದಾರೆ.
ಅಲ್ಲದೇ ಅನೇಕ ದೇವಾಲಯಗಳನ್ನು ನಿರ್ಮಿಸಿದ್ದಾರೆ. ಮಾನಸಗಲ್ಲಿನ ರಂಗನಾಥ, ಚಂದನಕೇರಿಯ
ಹನುಮಪ್ಪ, ಗೂಗಲ್ಲಿನ ಅಲ್ಲಮಪ್ರಭು ದೇವದುರ್ಗದ ಗೋಪಾಲಸ್ವಾಮಿ, ಕ್ಯಾದಿಗೇರಿಯ ವೀರಭದ್ರ,
ಜಾಲಹಳ್ಳಿಯ ರಂಗನಾಥ ಪ್ರಮುಖವಾದವುಗಳು.
ಇವರ ಹಳೆಯ ಅರಮನೆ ಚಂದನಕೇರಿಗೆ ಸಾಗುವ ಮಾರ್ಗಮಧ್ಯದಲ್ಲಿತ್ತು. ಈಗ ಅದು ಹಾಳಗಿದೆ.
ಆದರೆ ಅದರ ಅವಶೇಷಗಳನ್ನು ಇಂದಿಗೂ ಗುರುತಿಸಬಹುದಾಗಿದೆ. ರಾಜಧಾನಿ ಚಂದನಕೇರಿಯಿಂದ
ದೇವದುರ್ಗಕ್ಕೆ ವರ್ಗವಾದ ಮೇಲೆ ಊರ ಮಧ್ಯದಲ್ಲಿ ವಿಶಾಲವಾದ ಅರಮನೆಯನ್ನು ರಂಗಪ್ಪನಾಯಕನು
ಕಟ್ಟಿಸಿದನು. ಈಗ ಈ ಅರಮನೆಯ ಕೆಲಭಾಗಗಳು ಸಂಪೂರ್ಣ ಶಿಥಿಲಗೊಂಡಿದ್ದು, ಒಂದು ಭಾಗ ಮಾತ್ರ
ಉಳಿದಿದೆ. ಈ ಅರಮನೆಯ ಪ್ರವೇಶದ್ವಾರ ಮತ್ತು ಗೋಡೆಗಳು ಬಹಳ ಸುಂದರವಾಗಿವೆ. ಇದರ ಅರ್ಧ
ಭಾಗದಲ್ಲಿ ಅಂದು ಕಚೇರಿ ಕೆಲಸಗಳು ನಡೆಯುತ್ತಿದ್ದವು.
ಇಂದು ಈ ಮನೆತನದ ವಂಶಸ್ಥರು ದೇವದುರ್ಗದಲ್ಲಿ ವಾಸವಾಗಿದ್ದಾರೆ. ಅವರಲ್ಲಿ
ರಾಜವೆಂಕಟಪ್ಪ ನಾಯಕರು, ರಾಜಾಚಂದ್ರಹಾಸನಾಯಕರು, ರಾಜ್ಯದ ರಾಜಕಾರಣಿಗಳೊಂದಿಗೆ ಉತ್ತಮ
ಬಾಂಧವ್ಯ ಹೊಂದಿದ್ದಾರೆ. ಆ ಭಾಗದ ಎಲ್ಲಾ ಜನಾಂಗದ ಪ್ರಜೆಗಳ ಮನದಲ್ಲಿ ದ್ದಾರೆ.
೬. ಕನಕಗಿರಿಯ ಬೇಡ ಪಾಳೆಯಗಾರರು
ಕನಕಗಿರಿಯು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನಿಂದ ವಾಯುವ್ಯಕ್ಕೆ ಸುಮಾರು ೩೦
ಕಿ.ಮೀ. ದೂರದಲ್ಲಿದೆ. ಕನಕಗಿರಿಯನ್ನು ಗುಜ್ಜಲ ವಂಶದ ಬೇಡ ಪಾಳೆಯಗಾರರು ಆಳ್ವಿಕೆ
ಮಾಡಿದ್ದಾರೆ. ಕ್ರಿ.ಶ. ೧೪೩೬ರಲ್ಲಿ ಪರಸಪ್ಪ ಉಡಿಚನಾಯಕನು ಕನಕಗಿರಿಯನ್ನು
ಸ್ಥಾಪಿಸುತ್ತಾನೆ. ವಿಜಯನಗರದ ಪ್ರೌಧದೇವರಾಯ ಈತನಿಗೆ ೧೨ ಗ್ರಾಮಗಳನ್ನು ಉಂಬಳಿಯಾಗಿ
ನೀಡಿದನು. ಕ್ರಿ.ಶ. ೧೪೮೫ರಲ್ಲಿ ಸಾಳ್ವ ನರಸಿಂಹ ದೇವರಾಯ ಕನಕಗಿರಿ ನಾಡದೇವರ
ಅಮೃತಪಡಿಗೆಂದು ೨ ಗ್ರಾಮಗಳನ್ನು ಉಂಬಳಿಯಾಗಿ ನೀಡಿದನು. ವಿಜಯ ನಗರದ ಅರಸರು ಇವರಿಗೆ
ಮೊದಲ ಪ್ರಾಶಸ್ತ್ಯವನ್ನು ನೀಡುತ್ತಿದ್ದರು.
ಪರಸಪ್ಪನಾಯಕನ ತರುವಾಯ ಈತನ ಮಗನಾದ ನವಾಬ ಉಡಿಚನಾಯಕನಿಗೆ ಕ್ರಿ.ಶ. ೧೫೧೦ರಲ್ಲಿ
ಪಟ್ಟಾಭಿಷೇಕವಾಯಿತು. ಕ್ರಿ.ಶ. ೧೫೧೦ರಲ್ಲಿ ಕನಕಗಿರಿಯ ಪೇಟೆಯ ಸುಂಕ, ತಳವರಿಕೆ ಸುಂಕ,
ಚಿನ್ನಾಪುರ ತೊರೆಗಲ್ಲು ಬಯಲುಸೀಮೆ ಯಡಿಗಲ್ಲ, ಕಳಸಗ್ರಾಮ, ನವಲಿಸೀಮೆಯ ಜಾರಾಪುರ ಹೀಗೆ
ಒಟ್ಟು ಮೂರು ಗ್ರಾಮಗಳನ್ನು ನೀಡಿದನು.[3]
ತರುವಾಯ ಕೆಲವಡಿ ಉಡಿಚನಾಯಕ (ಕ್ರಿ.ಶ. ೧೫೩೩-೧೫೭೮) ನು ಅಧಿಕಾರಕ್ಕೆ ಬಂದನು. ಈತ
ವಿಜಯನಗರದೊಂದಿಗೆ ತಾಳಿಕೋಟೆ ಕದನಕ್ಕೆ ತೆರಳಿದ್ದ. ಈತನ ನಂತರ ಕನಕಪ್ಪ ಉಡಿಚನಾಯಕನ
(ಕ್ರಿ.ಶ. ೧೫೭೮-೧೬೧೮) ನು ಅಧಿಕಾರಕ್ಕೆ ಬಂದನು. ಈತನ ತಮ್ಮ ವೆಂಕಟಪ್ಪ ನಾಯಕನು
ಲಕ್ಷವರಹಗಳ ವೆಚ್ಚದಿಂದ ಊರ ಹೊರಗೆ ಸುಂದರವಾದ ಬಾವಿ ನಿರ್ಮಿಸಿದ್ದಾನೆ. ಇದನ್ನು
‘ವೆಂಕಟಪತಿ ಬಾವಿ’ ಎಂದು ಕರೆಯುತ್ತಾರೆ. ತದ ನಂತರ ಇಮ್ಮಡಿ ಉಡಿಚನಾಯಕ (ಕ್ರಿ.ಶ.
೧೬೧೮-೧೭೦೮) ನು ಅಧಿಕಾರರೂಢನಾದನು. ಈತನನ್ನು ಶಾಸನಗಳಲ್ಲಿ ‘ಗುಜ್ಜಲವಂಶೋದ್ಭವ’,
‘ಶ್ರೀಮಾನ್ ಮಹಾನಾಯ ಕಾಚಾರ್ಯ’, ‘ನಾಯಕ ಶಿರೋಮಣಿ’, ‘ಲಕ್ಷ್ಮಿನಾಗತಿ’, ‘ಇಮ್ಮಡಿ
ವುಡಸಿನಾಯಕ’ ಎಂದು ಕರೆಯಲಾಗಿದೆ.
ಕ್ರಿ.ಶ. ೧೬೫೩ರಲ್ಲಿ ಬಿಜಾಪುರದ ಆದಿಲ್‌ಶಾಹನ ದಂಡನಾಯಕ ಅಫಜಲ್‌ಖಾನನು ಕನಕಗಿರಿಯ
ಮೇಲೆ ದಾಳಿ ಮಾಡಿದನು. ಆತನನ್ನು ಕನಕಗಿರಿಯ ಅರಸ ಇಮ್ಮಡಿ ಉಡಿಚ ನಾಯಕ ಸೋಲಿಸುತ್ತಾನೆ.
ಔರಂಜೇಬನ ಸೈನಿಕರು ವಾಗಿನಗೇರಿಯನ್ನು ಮುತ್ತಿಗೆ ಹಾಕಿದಾಗ ಸುರಪುರದ ಅರಸ ಬಹರಿ
ಪಡ್ಡನಾಯಕನು ಅಲ್ಲಿಂದ ಪರಾರಿಯಾಗಿ ಗುಡಗುಂಟಿಯ ಮೂಲಕ ಕನಕಗಿರಿಗೆ ಬಂದನು. ಕನಕಗಿರಿಯ
ಇಮ್ಮಡಿ ಉಡಿಚನಾಯಕ ಒಂದು ವರ್ಷದವರೆಗೆ ಆತನನ್ನು ರಕ್ಷಣೆ ಮಾಡಿದನು. ಈತನ ಕಾಲದಲ್ಲಿ
ಕನಕಗಿರಿ ೩೨ ಲಕ್ಷ ಆದಾಯವನ್ನು ಹೊಂದಿತ್ತು.
ಈತನ ತರುವಾಯ ಇಮ್ಮಡಿ ಕನಕಪ್ಪ ಉಡಿಚನಾಯಕ (ಕ್ರಿ.ಶ. ೧೭೦೮-೧೭೫೨) ನು ಅಧಿಕಾರಕ್ಕೆ
ಬಂದನು. ಈತ ಕೂಡಲಿ ಶೃಂಗೇರಿ ಮಠಕ್ಕೆ ತೊಂಡೆಹಾಳ ಗ್ರಾಮವನ್ನು ತಮ್ಮ ತಂದೆ ತಾಯಿಗಳ
ಹೆಸರಿನಲ್ಲಿ ನೀಡುತ್ತಾನೆ. ಈತನ ನಂತರ, ಹಿರೇರಂಗಪ್ಪ ನಾಯಕ(ಕ್ರಿ.ಶ. ೧೭೫೨-೧೭೮೧)ನು
ಅಧಿಕಾರರೂಢನಾದನು. ಈತ ಚಿತ್ರದುರ್ಗದ ವೀರಮದಕರಿನಾಯಕನ ಸಹಾಯಕ್ಕೆ ಸೈನ್ಯವನ್ನು
ಕಳುಹಿಸಿದನು. ತರುವಾಯ ಇಮ್ಮಡಿ ಕನಕಪ್ಪನಾಯಕ (ಕ್ರಿ.ಶ. ೧೭೮೧-೧೭೮೮), ಈತನ ನಂತರ ಹಿರೇನಾಯಕ (ಕ್ರಿ.ಶ. ೧೭೮೮-೧೮೩೩)ನು ಅಧಿಕಾರರೂಢನಾದನು. ಈತನ ಕಾಲದಲ್ಲಿ ಕುಷ್ಟಗಿ, ಗಂಗಾವತಿ, ಹರಿಹರ ಮತ್ತು ದಾವಣಗೇರಿ ಪ್ರದೇಶಗಳು ಅಧೀನದಲ್ಲಿದ್ದವು.
ಈ ಎಲ್ಲಾ ಪ್ರದೇಶಗಳಿಂದ ಈತನ ರಾಜ್ಯಕ್ಕೆ ೯ ಲಕ್ಷ ಆದಾಯ ಬರುತ್ತಿತ್ತು. ಈತ ಮುಂಡರಗಿಯ
ದೇಸಾಯಿಯ ಮಗಳನ್ನು, ಬಾದರಬಂಡಿಯ ದೇಸಾಯಿಯ ಹೆಂಡತಿಯನ್ನು ಅಪಹರಿಸಿದ್ದನು. ಅವರು
ಹೈದ್ರಾಬಾದ್ ನಿಜಾಮನಿಗೆ ಮೊರೆಹೋದರು. ಆಗ ಹೈದ್ರಾಬಾದ್ ನಿಜಾಮ, ಸುರಪುರದ
ಪಾಮನಾಯಕನಿಗೆ, ಕನಕಗಿರಿಯ ಹಿರೇನಾಯಕನನ್ನು ಬಂಧಿಸಿ ತರುವಂತೆ ಆದೇಶಿಸುತ್ತಾನೆ. ಆಗ
ಸುರಪುರದ ಪಾಮನಾಯಕನಿಗೆ ಕನಕಗಿರಿಯ ಅರಸನನ್ನು ತೋಪಿನ ಬಾಯಿಗೆ ಕಟ್ಟಿ ಹಾರಿಸಲಾಯಿತು.
ಇಲ್ಲಿಗೆ ಕನಕಗಿರಿಯಲ್ಲಿ ಗುಜ್ಜಲ ವಂಶದವರ ಆಳ್ವಿಕೆ ಕೊನೆಯಾಗುತ್ತದೆ.
ನಂತರ ಇವರ ವಂಶಸ್ಥರು ಕ್ರಿ.ಶ. ೧೮೩೩ರಿಂದ ೧೯೪೮ರವರೆಗೆ ಹುಲಿಹೈದರನಿಂದ ಆಳ್ವಿಕೆ
ಮಾಡುತ್ತಾರೆ. ಹಿರೇನಾಯಕನ ಎರಡನೆಯ ಮಗ ರಂಗಪ್ಪನಾಯಕ ನಿಜಾಮನ ವಿರುದ್ಧ ಬಂಡೆದ್ದಾಗ
ನಿಜಾಮನು ಕನಕಗಿರಿಯ ಅಧೀನದ ಹುಲಿಹೈದರ್, ಹಿರೇಮನ್ನಾಪುರ, ಹೊಸಗುಡ್ಡ, ಗೋವಿನಾಳ,
ಹನುಮನಾಳ, ಶಿರವಾರ, ಕನಕಾಪುರ, ಸೋಮಸಾಗರ, ಓಬಳಬಂಡಿ, ಗಾಣದಾಳು, ತಾಳಿಕೇರಿ ಗುಂತಮಡು,
ಗುಳೇವು, ಶಿಡ್ಲಬಾವಿ ಮಂತಾದ ಹದಿನಾರು ಹಳ್ಳಿಗಳನ್ನು ಜಾಗೀರು ನೀಡಿದನು. ಈತನ ನಂತರ ಆತನ
ಹಿರಿಯ ಮಗ ರಂಗಪ್ಪನಾಯಕ ಅಧಿಕಾರಕ್ಕೆ ಬಂದನು. ಈತ ತಮ್ಮ ತಂದೆಯ ಆಡಳಿತದ ಕೆಲಸ
ಕಾರ್ಯಗಳನ್ನು ಮುಂದುವರೆಸಿದನು. ಈತನಿಗೆ ೩ ಜನ ಹೆಣ್ಣುಮಕ್ಕಳಿದ್ದುದರಿಂದ ತಮ್ಮ
ಸೋಮಸಾಗರದ ಕನಕಪ್ಪನಾಯಕನ ಮಗ ವುಡಿಸಿನಾಯಕನನ್ನು ದತ್ತಕ ತೆಗೆದುಕೊಳ್ಳಲಾಯಿತು. ಈತ
ಕಾಲವಾದ ಮೇಲೆ ಈತನ ಮಗ ರಾಜಾರಂಗಪ್ಪನಾಯಕ ಚಿಕ್ಕವನಿದ್ದ ಕಾರಣ ಆತನ ರಾಣಿ ಗೌರಮ್ಮ
ಸಂಸ್ಥಾನದ ಅಧಿಕಾರ ವಹಿಸಿಕೊಂಡಳು. ಚಿಕ್ಕವಸ್ಸಿನಲ್ಲಿಯೇ ಮಗ ರಂಗನಾಥಪ್ಪನ ಮಗ
ತೀರಿಕೊಂಡನು. ಹಿರಿಯರ ಸಲಹೆಯಂತೆ ತನ್ನ ಮೈದುನನ ಸೋಮಸಾಗರದ ರಂಗನಾಥಪ್ಪನ ಮಗ
ರಂಗಪ್ಪನಾಯಕನನ್ನು ದತ್ತಕ ತೆಗೆದುಕೊಂಡಳು. ಸ್ಥಳೀಯರ ಕುತಂತ್ರದಿಂದ ಆಡಳಿತ ಕುಸಿಯಿತು.
ಆಗ ಹೈದ್ರಾಬಾದ್ ನಿಜಾಮ ಹುಲಿಹೈದರ್ ಆಳಿತವನ್ನು ತನ್ನ ವಶಕ್ಕೆ ತೆಗೆದುಕೊಂಡನು. ನಂತರ ಈ
ಸಂಸ್ಥಾನದ ಕ್ರಿ.ಶ. ೧೯೪೮ ಸೆಪ್ಟಂಬರ್, ೧೮ ರಂದು ಭಾರತದ ಒಕ್ಕೂಟದೊಂದಿಗೆ
ವಿಲೀನವಾಯಿತು.
ಇವರ ಮನೆದೇವರು ತಿರುಪತಿ ತಿಮ್ಮಪ್ಪ, ಈತನ ಪ್ರತಿರೂಪವೇ ಕನಕಗಿರಿಯ ಕನಕಾಚಲ ವೆಂದು
ನಂಬಿದ್ದರು. ಕನಕಗಿರಿಯ ಕನಕಾಚಲಪತಿಯ ಜಾತ್ರೆಯು ಪ್ರತಿವರ್ಷ ಮಾಘ ಮಾಸ ಚತುಉದಶಿಯಂದು
ಪ್ರಾರಂಭವಾಗಿ ೯ ದಿನಗಳ ಕಾಲ ಪ್ರತಿದಿನ ಒಂದೊಂದು ಉತ್ಸವಗಳು ಜರುಗುತ್ತವೆ. ಕನಕಗಿರಿ
ನಾಯಕ ಪರಸಪ್ಪನಾಯಕನ ಕಾಲದಿಂದ ಈ ಜಾತ್ರೆಯು ಮುಂದುವರಿದಿದೆ. ಇವರು ಶೃಂಗೇರಿ ಮಠದ ಶ್ರೀ
ಶಂಕರ ಭಾರತೀ ಸ್ವಾಮಿಗಳಿಗೆ ಅನೇಕ ಗ್ರಾಮಗಳನ್ನು ದಾನವಾಗಿ ನೀಡಿದ್ದರು.
ಇವರ ಆಸ್ಥಾನದಲ್ಲಿ ಅನೇಕ ಸಾಹಿತಿಗಳು ಆಶ್ರಯದಾತರಾಗಿದ್ದರು. ಹಿರೇರಂಗಪ್ಪನಾಯಕ
ಆಸ್ಥಾನದಲ್ಲಿ ಚಿಂದಾನಂದಾವಧೂತರೆಂಬ ವಿದ್ವಾಂಸರಿದ್ದರು. ಚಿದಾನಂದ ವಚನ, ಚಿದಾನಂದ
ಕೀರ್ತನೆ, ಕಾಮವಿಡಂಬನೆ ಕೃತಿಗಳನ್ನು ರಚಿಸಿದ್ದಾರೆ. ವಿಜಯವೆಂಕಟಾಚಾರ್ಯರೆಂಬ ಕನ್ನಡ
ಮತ್ತು ಸಂಸ್ಕೃತ ಪಂಡಿತರಿದ್ದರು. ಕವಿ ಶಿರುಗುಪ್ಪ ಸದಾಶಿವಯ್ಯನು ಅರ್ಧಕ್ಕೆ ನಿಂತಿದ್ದ
ಅಪರಾಳ ತಮ್ಮಣ್ಣನ ಶ್ರೀಕೃಷ್ಣಪಾರಿಜಾತ ನಾಟಕವನ್ನು ಹಿರೇರಂಗಪ್ಪನಾಯಕ ಇಚ್ಛೆಯ ಮರೆಗೆ
ಪೂರ್ತಿಗೊಳಿಸಿದನು. ಇವರು ಕುರಿತಾಗಿ ಯಥೇಚ್ಛವಾದ ಜನಪದ ಸಾಹಿತ್ಯ ಹೊರ ಬಂದಿದೆ.
ಈ ಮನೆತನದ ೪ ಕುಟುಂಬಗಳು ಹುಲಿಹೈದರ್‌ನಲ್ಲಿ ವಾಸವಾಗಿವೆ. ಈ ಮನೆತನ ದವರನ್ನು ಆ ಭಾಗದ ಜನರು ವಾಲ್ಮೀಕಿ ಗುರುಗಳೆಂಎದು ಗುರುತಿಸುತ್ತಾರೆ.
೭. ಗುಡೇಕೋಟೆ ಬೇಡ ಪಾಳೆಗಾರರು
ಗುಡೇಕೋಟೆ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕು ಕೇಂದ್ರದಿಂದ ಪೂರ್ವಕ್ಕೆ ೨೫
ಕಿ.ಮೀ. ಅಂತರದಲ್ಲಿದೆ. ಇದೊಂದು ಬೇಡ ಪಾಳೆಯಗಾರರ ಮನೆತನವಾಗಿತ್ತು. ಗುಡೇಕೋಟೆ
ಅರಸುಮನೆತನದ ಸ್ಥಾಪಕನ ಕುರಿತಾಗಿ ಭಿನ್ನಪ್ರಾಯಗಳಿವೆ. ಹಿರೇ ಬೊಮ್ಮಣ್ಣನಾಯಕ, ಗಂಡಳನಾಯಕ
ಎಂದು ಕೆಲವು ವಂಶಾವಳಿಗಳು ಹೇಳಿದರೆ, ಕುಮಾರರಾಮನ ಕೈಫಿಯತ್ತಿನ ಪ್ರಕಾರ ಇವರ ಮೂಲವನ್ನು
ಕಂಪಲಿಯ ಕುಮಾರರಾಮನ ವಂಶಜರೆಂದು, ಗಡಿಯಾಂಕ ಭೀಮನು ಕುಮಾರರಾಮನ ಜೊತೆ ಮುತ್ತಿನ
ಚೆಂಡಾಟದಲ್ಲಿ ಭಾಗವಹಿಸಿದ್ದ ಆಪ್ತ ಸ್ನೇಹಿತ ನಾಗಿದ್ದರಿಂದ ಈತನೇ ಗುಡೇಕೋಟೆಯ ಸ್ಥಾಪಕ
ಇಲ್ಲವೆ ಆ ಪ್ರದೇಶಕ್ಕೆ ನಾಯಕನಾಗಿರಬೇಕು. ವಂಶಾವಳಿಯ ಪ್ರಕಾರ ಗಂಡಳನಾಯಕ (ಕ್ರಿ.ಶ.
೧೫೫೮-೧೫೨೧)ನು ಗುಡೇಕೋಟೆಯನ್ನು ಆಳಿದ ಪ್ರಥಮ ಅರಸ. ನಂತರದಲ್ಲಿ ಪೆನ್ನಪ್ಪನಾಯಕ (ಕ್ರಿ.ಶ. ೧೫೨೧-೧೫೪೧)
ಪಾಪನಾಯಕ (ಕ್ರಿ.ಶ. ೧೫೧೪-೧೫೫೮) ಕೆಮ್ಮಯ್ಯರಾಜ (ಕ್ರಿ.ಶ. ೧೫೫೮-೧೬೦೨) ರಾಮಪ್ಪನಾಯಕ
(ಕ್ರಿ.ಶ. ೧೬೦೨-೧೬೩೭) ಇವರೆಲ್ಲರೂ ಕ್ರಮವಾಗಿ ಆಳ್ವಿಕೆ ಮಾಡಿದವರಾದರೂ ಇವರ ಸಾಧನೆಯ
ಕುರಿತಾಗಿ ಯಾವುದೇ ಆಧಾರಗಳು ಲಭ್ಯವಿಲ್ಲ.
ನಂತರ ರಾಮಪ್ಪನಾಯಕನ ಮಗ ಬೊಮ್ಮಂತರಾಜ (ಕ್ರಿ.ಶ. ೧೬೩೭-೧೬೭೬)ನು ಅಧಿಕಾರಕ್ಕೆ
ಬರುತ್ತಾನೆ. ಕೃಷ್ಣದೇವರಾಯ ಈತನಿಗೆ ೭ ಸೀಮೆಗಳನ್ನು ದಯಪಾಲಿಸಿದನು. ನಂತರ ಈತನ ಮಗ
ಚಿನ್ನಯರಾಜ (ಕ್ರಿ.ಶ. ೧೬೭೬-೧೬೬೮)ನು ಸಿಂಹಾಸನಕ್ಕೆ ಬಂದನು. ಈತನು ಗುಡೇಕೋಟೆ,
ಸಂಡೂರು, ಬಾಣಾರವಿ ಸೀಮೆಗಳನ್ನು ಆಳುತ್ತಾ ಆದೋನಿ ನವಾಬನಿಗೆ ಪೊಗದಿಯನ್ನು
ಸಲ್ಲಿಸುತ್ತಿದ್ದನು. ಈತನ ನಂತರ ಕ್ರಿ.ಶ. ೧೬೮೮ರಲ್ಲಿ ಜಟ್ಟಿಂಗರಾಜನು ಅಧಿಕಾರಕ್ಕೆ
ಬರುತ್ತಾನೆ. ಈತ ಗುಡೇಕೋಟೆಯ ಪ್ರಸಿದ್ಧ ಅರಸ. ಆದರೆ ಆದೋನಿ ನವಾಬ ಈತನ ಪ್ರದೇಶಗಳನ್ನು
ತನ್ನ ವಶದಲ್ಲಿಟ್ಟುಕೊಳ್ಳುತ್ತಾನೆ. ಈತನ ನಂತರ ರಾಮಪ್ಪನಾಯಕ (ಕ್ರಿ.ಶ. ೧೭೩೭-೧೭೪೨)ನು
ಅಧಿಕಾರಕ್ಕೆ ಬರುತ್ತಾನೆ. ಆಮೇಲೆ ಶಿವಪ್ಪನಾಯಕ (ಕ್ರಿ.ಶ. ೧೭೪೨-೧೭೫೦), ಚಿನ್ನಯರಾಜ
ಕ್ರಿ.ಶ. ೧೭೫೨ರಲ್ಲಿ ಅಧಿಕಾರಕ್ಕೆ ಬಂದನು. ಈತನೇ ಗುಡೇಕೋಟೆಯ ಈತನೇ ಗುಡೇಕೋಟೆಯ ಕೊನೆಯ
ಚೆಲುವಾದಿ ಚಿನ್ನಪ್ಪನ ಮಗಳೂ, ಮದಲೆ ಹನುಮಯ್ಯನ ಪತ್ನಿಯೂ ಆದ ಓಬವ್ವ ನೆಲಸಿದ್ದಳು.
ನಂತರ ಗಡೇಕೋಟೆ, ಹೈದರಾಲಿಯ ತರುವಾಯ ಟಿಪ್ಪುಸುಲ್ತಾನನ ದಾಳಿಗೆ ತುತ್ತಾಗಿ, ಕೆಲವು ದಿನಗಳ
ಕಾಲ ಇವರ ಅಧೀನದಲ್ಲಿತ್ತು. ಕ್ರಿ.ಶ. ೧೭೯೯ರಲ್ಲಿ ಟಿಪ್ಪುಸುಲ್ತಾನ ಮರಣ ಹೊಂದಿದ
ತರುವಾಯ ನಿಜಾಮನ ಅಧೀನಕ್ಕೆ ಒಳಪಟ್ಟಿತು. ಕ್ರಿ.ಶ. ೧೮೦೩ರ ಮೈಸೂರು ಸಪ್ಲಿಮೆಂಟರಿ
ಒಪ್ಪಂದದ ಪ್ರಕಾರ ಬ್ರಿಟಿಷರ ಆಳ್ವಿಕೆಗೆ ಒಳಪಟ್ಟಿತು. ಆಗ ಗುಡೇಕೋಟೆ ಅರಸರ ಆಳ್ವಿಕೆ
ಕೊನೆಗೊಂಡಿತು. ಬ್ರಿಟಿಷರು ಈ ಮನೆತನದವರಿಗೆ ವಿಶ್ರಾಂತಿ ವೇತನ ನೀಡಿದರು. ೧೯೨೯ರವೆರಗೆ
ಇವರು ವಿಶ್ರಾಂತಿ ವೇತನ ಪಡೆದ ಕುರಿತಾಗಿ ಕೆಲ ದಾಖಲೆಗಳು ಮಾಹಿತಿಯನ್ನು ಒದಗಿಸುತ್ತವೆ.
ಅಲ್ಲದೆ ಕೆಲವು ಪ್ರದೇಶಗಳ ಕಂದಾಯವನ್ನು ವಸೂಲಿ ಮಾಡಲು ಗಡೇಕೋಟೆ ಅರಸರಿಗೆ ಅನುಮತಿ
ನೀಡಿದ್ದರು.
ಇವರು ಕೃಷಿ ನೀರಾವರಿಗಾಗಿ ಆದ್ಯತೆ ನೀಡಿದ್ದರು. ಇವರು ನಿರ್ಮಿಸಿದ ಬೊಮ್ಮಲಿಂಗಕೆರೆ,
ಏಣಿ ಈರಪ್ಪನ ಬಾವಿ ಪ್ರಮುಖವಾದವುಗಳು. ಇವರ ಕಾಲದಲ್ಲಿ ಅನೇಕ ದೇವಾಲಯಗಳು
ನಿರ್ಮಾಣವಾದವು. ಅವುಗಳಲ್ಲಿ ರಾಮಲಿಂಗೇಶ್ವರ, ಆಂಜನೆಯ, ಬಸವಣ್ಣ, ಈಶ್ವರ, ಲಕ್ಷ್ಮೀ,
ಪಂಚಲಿಂಗೇಶ್ವರ, ಶಿವಪಾರ್ವತಿ, ಕಾಳಮ್ಮ, ಚೌಡಮ್ಮ, ಮಲಿಯಮ್ಮ ದೇವಾಲಯ ಗಳು
ಪ್ರಮುಖವಾದವುಗಳು.
ಈ ಅರಸರ ವಂಶಸ್ಥರು ಗಡೇಕೋಟೆಯಲ್ಲಿ ನೆಲೆಸಿದ್ದಾರೆ. ಇವರು ತಮ್ಮ ಪೂರ್ವಜರ
ಆಸ್ತಿಯನ್ನು ಕಾಪಾಡಿಕೊಂಡು ಬಂದಿದ್ದಾರೆ. ಇವರ ಆರ್ಥಿಕ ಸ್ಥಿತಿ ತಕ್ಕಮಟ್ಟಿಗೆ ಉತ್ತಮ
ವಾಗಿದೆ.
೮. ಜರಿಮಲೆ ಬೇಡ ಪಾಳೆಯಗಾರರು
ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನಿಂದ ಆಗ್ನೇಯಕ್ಕೆ ೧೫ ಕಿ.ಮೀ.
ದೂರದಲ್ಲಿರುವ ಜರಿಮಲೆ ಬೇಡ ಪಾಳೆಯಗಾರರು ಆಂಧ್ರದ ಕದ್ರಿಮೂಲದವರೆಂದು ಕರೆದು ಕೊಂಡವರು.[6]
ಕಾರಣಾಂತರಗಳಿಂದ ವಿಜಯನಗರಕ್ಕೆ ಬಂದು ನೆಲೆಸಿದರು. ವಿಜಯನಗರದ ಅರಸರ ಸೇವೆ ಯನ್ನು
ಮಾಡಿಕೊಂಡಿದ್ದವರಲ್ಲಿ ಮೊದಲಿಗ ಪಾಪಣ್ಣನಾಯಕ ಈತನು ವೀರನರಸಿಂಹ ಕ್ರಿ.ಶ. ೧೪೧೯ ೧೫೦೫ನ
ಸೇವಕರಲ್ಲಿ ಒಬ್ಬನಾಗಿ ಸೇವೆಸಲ್ಲಿಸುತ್ತಿದ್ದನು. ಆದನ ಪ್ರೀತಿಗೆ ಪಾತ್ರನಾಗಿದ್ದರಿಂದ
ವಡ್ಡವ, ದರೋಜಿ ಗ್ರಾಮಗಳು ಬಳುವಳಿಯಾಗಿ ಬಂದವು. ಈತನ ತರುವಾಯ ಮಗ ಪೆನ್ನಪ್ಪನಾಯಕ
ಅಧಿಕಾರಕ್ಕೆ ಬಂದನು. ವೀರನರಂಸಿಹ ಹಾಗೂ ಅಚ್ಯುತ ದೇವರಾಯ ಈತನಿಗೆ ಜಹಗೀರು ನೀಡಿ, ೫೦೦ ಅಶ್ವದಳ, ೩೦೦೦ ಕಾಲ್ದಳ ಪಡೆ ಹೊಂದಲು
ಅನುಮತಿ ನೀಡಿದ್ದನು. ಆಗ ಈ ಭಾಗದಲ್ಲಿ ಮಹಮದೀಯರ ದಾಳಿಗಳು ಹೆಚ್ಚಾಗಿದ್ದರಿಂದ
ಪೆನ್ನಪ್ಪನಾಯಕ ಕಣಕುಪ್ಪೆ, ಕೂಡಲಗಿ, ನಾರಾಯಣದೇವರಕೆರೆ, ಡಣಾಯಕನಕೆರೆ, ಸೊಂಡೂರು
ಪ್ರದೇಶವನ್ನು ತನ್ನ ವಶದಲ್ಲಿಟ್ಟುಕೊಳ್ಳುತ್ತಾನೆ. ಪೆನ್ನಪ್ಪನಾಯಕ ಉಜ್ಜಿಯಿನಿ ಯಲ್ಲಿ
ಕೋಟೆ ಕಟ್ಟಿಸಿದನೆಂದು ಮೆಕೆಂಜಿ ಬರಹಗಳು ಹೇಳುತ್ತವೆ.
ಪೆನ್ನಪ್ಪನಾಯಕನ ೨ನೇ ಮಗ ಭೂಮಿರಾಜ ತಮ್ಮ ತಂದೆಯ ನಂತರ ಆಳ್ವಿಕೆಮಾಡಿದನು. ಸಾಹಸಿಯಾದ
ಈತ ಬಿಜಾಪುರದ ಬಾದಷಹನ ಕುದುರೆಯನ್ನು ಪಳಗಿಸಿದ್ದಕ್ಕಾಗಿ ‘ಜಮೇದಾರ್ ಗುಡ್ಡಯ್ಯ
ಜರಿಮಲ್ಲ’ ಬಿರುದನ್ನು ಪಡೆದನು. ಆತನಿಂದ ನಾಲ್ಕು ಮಾಗಣಿಗಳನ್ನು, ೨೦೦೦ರೂ. ಕಾಣಿಕೆ,
೨೦೦೦ ಕಾಲಾಳು, ೩೦೦ ಅಶ್ವಗಳನ್ನು ಇಟ್ಟುಕೊಳ್ಳಲು ಅನುಮತಿ ಯನ್ನು ಪಡೆಯುತ್ತಾನೆ. ಈತನ
ನಂತರ ಅಧಿಕಾರಕ್ಕೆ ಬಂದವನು ಇಮ್ಮಡಿನಾಯಕ. ಈತನ ಕಾಲದಲ್ಲಿ ಬಿಜಾಪುರದ ಆದಿಲ್‌ಶಾಹಿಯು
ಜರಿಮಲೆಯ ಕೆಲವು ಪ್ರದೇಶಗಳನ್ನು ಗೆದ್ದು ಕೊಂಡನು. ಸಾಕಷ್ಟು ಸಂಪತ್ತನ್ನು
ಕೊಳ್ಳೆಹೊಡೆದನು. ಜರಿಮಲೆನಾಯಕನು ಮಹ್ಮದ್ ಆದಿಲ್‌ಶಾಹನಿಗೆ ವಾರ್ಷಿಕ ೯೩,೭೫೦
ರೂ.ಗಳನ್ನು ಕಾಣಿಕೆಯೆಂದು ಕೊಡುತ್ತಿದ್ದನು.[7]
ಬಿಜಾಪುರ ಸುಲ್ತಾನನು ಇಮ್ಮಡಿನಾಯಕನು ತನಗೆ ಅವಿಧೇಯತೆಯನ್ನು ತೋರಿಸುತ್ತಾನೆಂಬ
ಕಾರಣಕ್ಕಾಗಿ ಉಜ್ಜಿಯಿನಿಯ ಮೇಲೆ ದಾಳಿಮಾಡಿ ಅದನ್ನು ವಶಪಡಿಸಿಕೊಳ್ಳುತ್ತಾನೆ. ನಂತರ
ಬೊಮ್ಮಣ್ಣನಾಯಕನು ಅಧಿಕಾರಕ್ಕೆ ಬರುತ್ತಾನೆ. ಈತನ ಕಾಲಾವಧಿಯಲ್ಲಿ ಹರಪನಹಳ್ಳಿ ಮತ್ತು ಚಿತ್ರದುರ್ಗದ ಚಿಕ್ಕಣ್ಣನಾಯಕ (ಕ್ರಿ.ಶ. ೧೬೭೫-೧೬೮೬)ನು ಉಜ್ಜಿಯಿನಿಯ ಮೇಲೆ ಆಕ್ರಮಣ ಮಾಡಿ
ನಂತರ ಒಪ್ಪಂದದಂತೆ ಮತ್ತೆ ಜರಿಮಲೆಯವರಿಗೆ ಬಿಟ್ಟುಕೊಡುತ್ತಾನೆ. ನಂತರದಲ್ಲಿ
ಬೊಮ್ಮಣ್ಣನಾಯಕ ರಾಜಕೀಯವಾಗಿ ಹೀನಾಯ ಸೋಲು ಕಂಡನು. ಇದನ್ನು ಅರಿತ ಮರಾಠ ದಂಡನಾಯಕ
ಸಿದ್ದಾಜಿ ಘೋರ್ಪಡೆಯು ಕ್ರಿ.ಶ. ೧೭೨೮ರಲ್ಲಿ ಸೊಂಡೂರು, ಕುಡುತಿನಿಗಳನನು ಪಡೆಯಲು
ಮುಂದಾದನು. ಅಲ್ಲದೆ ೮ ವರ್ಷಗಳವರೆಗೆ ಚೌಥ್ ನೀಡು ವಂತೆ ಒತ್ತಾಯಪಡಿಸಿದನು. ಕ್ರಿ.ಶ.
೧೭೪೨ರಲ್ಲಿ ಹರಪನಹಳ್ಳಿಯವರು ಜರಿಮಲೆಯವರ ನಾರಾಯಣದೇವರಕೆರೆ, ಡಣಾಯಕನಕೆರೆ
ಪ್ರದೇಶಗಳನ್ನು ಪಡೆದುಕೊಂಡರು. ಈ ಸಂದರ್ಭದಲ್ಲಿ ಚಿತ್ರದುರ್ಗದಲ್ಲಿ ಚಿತ್ರದುರ್ಗದವರು
ಬೊಮ್ಮಣ್ಮನಾಯಕನಿಗೆ ಸಹಾಯ ಮಾಡಲಿಲ್ಲ.
ನಂತರ ಬೊಮ್ಮಣ್ಣನಾಯಕನ ಮಗ ಇಮ್ಮಡಿನಾಯಕ ಜರಿಮಲೆಯ ದೊರೆಯಾದ, ಈತ ಚಿತ್ರದುರ್ಗದ ಗಡಿ
ಪ್ರದೇಶಗಳಲ್ಲಿ ಉಪಟಳ ಆರಂಭಿಸಿದ ಸಿಟ್ಟಿಗೆದ್ದ ಚಿತ್ರದುರ್ಗದ ಅರಸ ರಾಜಾವೀರಮದಕರಿನಾಯಕ
(ಕ್ರಿ.ಶ. ೧೭೫೪-೧೭೭೯)ನು ಜರಿಮಲೆಯ ಮೆಲೆ ದಂಡೆತ್ತಿ ಬರುತ್ತಾನೆ. ಜರಿಮಲೆಯ
ರಾಜಪರಿವಾರವನ್ನು ಚಿತ್ರದುರ್ಗದ ಕೋಟೆಗೆ ಕರೆತಂದು ಸೆರೆಯಲ್ಲಿ ಇಡುತ್ತಾರೆ. ಇದನನು
ಅರಿತ ಹೈದರಾಲಿ ಚಿತ್ರದುರ್ಗವನ್ನು ಗೆಲ್ಲಬೇಕೆಂದು, ಚಿತ್ರದುರ್ಗಿದವರಿಂದ
ಅತೃಪ್ತಗೊಂಡವರನ್ನುಭೇಟಿಮಾಡುತ್ತಾನೆ. ಅದರಲ್ಲಿ ಜರಿಮಲೆ ಯವರು ಹೈದರಾಲಿಗೆ ಸಹಾಯ ಮಾಡಲು
ಒಪ್ಪುತ್ತಾರೆ. ಕ್ರಿ.ಶ. ೧೭೭೯ರಲ್ಲಿ ಹೈದರಾಲಿ ಚಿತ್ರದುರ್ಗವನ್ನು ವಶಪಡಿಸಿಕೊಂಡಾಗ
ಜರಿಮಲೆ ನಾಯಕರಿಗೆ ಮದಕರಿನಾಯಕನ ಸೋಲು ಖುಷಿ ನೀಡುತ್ತದೆ. ಆಗ ಹೈದರಾಲಿ ಜರಿಮಲೆ ನಾಯಕ
ಅಧಿಕಾರವನ್ನು ನೀಡುತ್ತಾನೆ. ಬೊಮ್ಮಣ್ಣನಾಯಕ ಪುನಃ ಜರಿಮಲೆಯಿಂದ ಅಧಿಕಾರ
ಪ್ರಾರಂಭಿಸುತ್ತಾನೆ. ಆದರೆ ಬರುಬರುತ್ತಾ ಜರಿಮಲೆಯ ಅರಸನ ಸಾಹಸವನ್ನು ಕಂಡು ಹೈದರಾಲಿಗೆ
ಹೊಟ್ಟೆಕಿಚ್ಚಾಯಿತು. ಆಗ ಜರಿಮಲೆಯನ್ನು ವಶಪಡಿಸಿಕೊಳ್ಳತ್ತಾನೆ. ಆಗ ಜರಿಮಲೆ ಅರಸ
ಸುರಪುರಕ್ಕೆ ಓಡಿಹೋಗಿ ಅಲ್ಲಿಯೇ ಅರಸರ ಆಶ್ರಯ ಪಡೆಯುತ್ತಾನೆ. ಕ್ರಿ.ಶ. ೧೭೯೯ರಲ್ಲಿ
ಒಪ್ಪಂದದ ಪ್ರಕಾರ ಜರಿಮಲೆಯು ಹೈದ್ರಾಬಾದ್ ನಿಜಾಮನ ವಶವಾಯಿತು. ಆಗ ಜರಿಮಲೆ ಅರಸ ಹೈದ್ರಾಬಾದ್ ನಿಜಾಮನಿಗೆ ಕಪ್ಪವನ್ನು ಕೊಡುವುದಾಗಿಯೂ ತಮಗೆ
ತಮ್ಮ ರಾಜ್ಯವನ್ನು ಪುನಃ ನೀಡುವಂತೆ ಕೇಳಿಕೊಂಡನು. ಆಗ ಕ್ರಿ.ಶ. ೧೮೦೦ರಲ್ಲಿ ಒಂದು
ವರ್ಷಕ್ಕೆ ೭೦೦೦ ರೂಗಳನ್ನು, ೧೮೦೧ಕ್ಕೆ ೨೦೦೦ರೂಗಳನ್ನು ಮುಂದಿನ ವರ್ಷಗಳಲ್ಲಿ ಅದೇ ರೀತಿ
ಕಷ್ಟವನ್ನು ಕೊಡಬೇಕೆಂಬ ಒಪ್ಪಂದ ವನ್ನು ಮಾಡಿಕೊಳ್ಳಲಾಯಿತು. ಆಗ ಜರಿಮಲೆಯನ್ನು
ನಾಯಕರಿಗೆ ಬಿಡಲಾಯಿತು. ಕ್ರಿ.ಶ. ೧೮೦೦ರಲ್ಲಿ ಜರಿಮಲೆ ಈಸ್ಟ್‌ಇಂಜಿಯಾ ಕಂಪನಿಗೆ
ಸೇರಿತಲ್ಲದೆ, ಕ್ರಿ.ಶ. ೧೮೦೧ರಲ್ಲಿ ಜರಿಮಲೆ ಮನೆತನದವರಿಗೆ ಮಾಸಾಶನ ಮಂಜೂರು
ಮಾಡಲಾಯಿತು. ಇದು ಈಗಿನ ವಂಶಸ್ಥರಾದ ಪಂಪಾಪತಿ ನಾಯಕರ ತಂದೆಯವರ ಕಾಲದವರೆಗೆ ೪೨ ರೂ. ೧೨
ಆಣೆ ಬರುತ್ತಿತ್ತು. ನಂತರ ೨೫೦ ರೂ. ಬರುತ್ತಿತ್ತು. ಅನಂತರ ರದ್ದಾಗಿದೆ.
ಇವರು ಅನೇಕ ದೇವಾಲಯಗಳನ್ನು ಕೋಟಿ ಕೊತ್ತಲುಗಳನ್ನು ನಿರ್ಮಿಸಿದ್ದಾರೆ. ಪ್ರತಿ ವರ್ಷ
ಉಜ್ಜಿನಿ ಮಠಕ್ಕೆ ತೈಲಾಭಿಷೇಕ ಮಾಡುವ ಸಂಪ್ರದಾಯವಿದೆ. ಇಂದು ಜರಿಮಲೆಯಲ್ಲಿ ಇವರ ಹಳೆಯ
ಅರಮನೆಯ ಅವಶೇಷಗಳನ್ನು ಗುರುತಿಸಬಹುದಾಗಿದೆ.
ಈ ಮನೆತನದ ವಂಶಸ್ಥರು ಜರಿಮಲೆಯಲ್ಲಿ ವಾಸವಾಗಿದ್ದಾರೆ. ಕರ್ನಾಟಕದ ಉಳಿದ ನಾಯಕ ಅರಸು
ಮನೆತನಗಲ್ಲಿಯ ಅರ್ಥಿಕ ಸ್ಥಿತಿಗಿಂತ ಅತೀ ಕೆಳಮಟ್ಟದ ಸ್ಥಿತಿಯನ್ನು ತಲುಪಿದ ಮನೆತನ
ಇದಾಗಿದೆ. ಆದರೆ ಸಾಮಾಜಿಕವಾಗಿ, ರಾಜಕೀಯವಾಗಿ ಇವರಿಗೆ ಅಪಾರ ವಾದ ಗೌರವವಿದೆ.
ಈ ಮೇಲಿನ ಈ ಶಾನ್ಯ ಕರ್ನಾಟಕದ ಬೇಡ ಪಾಳೆಯಗಾರರು ಸ್ವತಂತ್ರ ಆಡಳಿತ
ಆರಂಭಿಸಿದಂದಿನಿಂದಲೇ ಒಂದು ಸ್ವರೂಪವನ್ನು ಪಡೆದುಕೊಂಡು ತಮ್ಮ ವ್ಯಾಪ್ತಿಯನ್ನು
ವಿಸ್ತರಿಸಿಕೊಂಡು, ಉತ್ತಮ ಆಡಳಿತವನ್ನು ಒದಗಿಸುವ ಮೂಲಕ ತಮ್ಮ ಸ್ವಂತಿಕೆಯನ್ನು
ಮೆರೆದರು. ಅನ್ಯಶಕ್ತಿಗಳ ಅಡಚಣೆ ಹಾಗೂ ಆಕ್ರಮಣಗಳ ಮಧ್ಯೆ ಅನೇಕ ಸಾರ್ವಜನಿಕ ಕಲ್ಯಾಣ
ಕಾರ್ಯಗಳನ್ನು ಮಾಡಿದರು. ತಮ್ಮ ತಮ್ಮ ರಾಜ್ಯವನ್ನು ಅಭಿವೃದ್ದಿಯೆಡೆಗೆ ಕೊಂಡೊಯ್ಯಲು
ಪ್ರಯತ್ನಿಸಿದರು. ಉಜ್ಜಲ ಐತಿಹಾಸಿಕ ಪರಂಪರೆಯನ್ನು ಹೊಂದಿದ್ದ ಇವರಿಗೆ ಅವನತಿ
ಪ್ರಾಪ್ತವಾದುದು ಹದಿನೇಳು ಮತ್ತು ಹದಿನೆಂಟನೆಯ ಶತಮಾನಗಳಲ್ಲಿ. ಆಗ ಕೆಲವು ಬೇಡ
ಪಾಳೆಯಪಟ್ಟುಗಳು ಕ್ಷೀಣಿಸತೊಡಗಿದವು. ಇದಕ್ಕೆ ಕಾರಣ ಆ ಪಾಳೆಯ ಪಟ್ಟುಗಳಲ್ಲಿ
ಮನೆಮಾಡಿದ್ದ ಪರಸ್ಪರ ಆಂತರಿಕ ಕಲಹ, ದ್ವೇಷ, ಈರ್ಷ್ಯೆ, ವೈಷಮ್ಯ, ಅಧಿಕಾರ
ವಿಸ್ತರಣಾಕಾಂಕ್ಷೆಗಳೆಲ್ಲ ಒಂದೆಡೆಯಾದರೆ, ಇವುಗಳನ್ನೇ ಸದುಪಯೋಗ ಪಡಿಸಿಕೊಂಡ
ಹೈದರ್‌ಅಲಿ, ಟಿಪ್ಪುಸುಲ್ತಾನ್, ಮರಾಠರು, ಇಂಗ್ಲಿಷರು ಮತ್ತು ಹೈದ್ರಾಬಾದ್ ನಿಜಾಮರು
ಆಡಲಿತದಲ್ಲಿ ನಾಯಕ ಅರಸರ ಕ್ಷಾತ್ರತೇಜಸ್ಸಿನ ಸಾಮರ್ಥ್ಯವನ್ನು ಅರಿತರು. ಇವರು ಈ ಬೇಡ
ಪಾಳೆಯಗಾರರನ್ನು ಕುತಂತ್ರದಿಂದ ಮೂಲೆಗೊತ್ತಿ ಅವರ ಅಧಿಕಾರವನ್ನು ಕಬಳಿಸುವಲ್ಲಿ
ಪ್ರಯತ್ನಿಸಿ ಯಶಸ್ವಿಯಾದರು. ಅಲ್ಲದೆ, ಅವರ ಸಂಪತ್ತನ್ನು ದೋಚಿದರು. ಅಧಿಕಾರ ಕಳೆದುಕೊಂಡ
ಬೇಡ ಪಾಳೆಯಗಾರರು ಅಧಿಕಾರ ಗಿಟ್ಟಿಸಿಕೊಳ್ಳಲು ಮರುಪ್ರಯತ್ನ ಮಾಡಿದರೂ ಯಶಸ್ಸು ಸಿಗದ
ಸಂದರ್ಭಗಳು ಸೃಷ್ಟಿಯಾದವು. ಇವರ ಅವನತಿಯ ಕಾಲ ಬಂದಿತು. ಆದರೆ ಇರುವಷ್ಟು ಕಾಲ ಇವರು
ವೈಭವದ ಅಧಿಕಾರ ನಡೆಸಿದರೆಂಬುದು ದಿಟ.
ಈ ಬೇಡ ಪಾಳೆಯಗಾರರ ರಾಜಕೀಯ ಚರಿತ್ರೆಯಷ್ಟೇ ಅವರ ಸಾಂಸ್ಕೃತಿಕ ಜೀವನವೂ
ವೈಭವಯುತವಾದುದು. ಇವರು ಹತ್ತನೇ ಶತಮಾನದಿಂದ ಹತ್ತೊಂಭತ್ತನೇ ಶತಮಾನದವರೆಗೆ ಸಾಂಸ್ಕೃತಿಕ
ಕ್ಷೇತ್ರದಲ್ಲಿ ಮಾಡಿದ ಸಾಧನೆ ಅಪಾರ. ದಕ್ಷಿಣಭಾರತದ ಜನತೆ ಅರಾಜಕತೆಯ ಭೀತಿಯಿಂದ
ತತ್ತರಿಸುತ್ತಿದ್ದ ಸಮಯದಲ್ಲಿ ಅವರಿಗೆ ರಾಜಕೀಯ ಭದ್ರತೆಯನ್ನು ಒದಗಿಸು ವಲ್ಲಿ ಇವರು
ಯಶಸ್ವಿಯಾದರು. ತಾವಿ ನೆಲೆಸಿದ್ದ ಪ್ರದೇಶಗಳಲ್ಲಿ ಕೋಟೆ-ಕೊತ್ತಲುಗಳನ್ನು
ಕಟ್ಟಿಸಿದರಲ್ಲದೆ, ಜನಸಾಮಾನ್ಯರ ಬದುಕಿಗೆ ರಕ್ಷಣೆ ನೀಡಿದರು. ಹಾಗೂ ಇವರ ರಾಜಧಾನಿ
ಗಳೆಲ್ಲವೂ ಸುರಕ್ಷಿತ ಸ್ಥಳಗಳಲ್ಲಿರುವುದು ವಿಶೇಷ. ಹೀಗಾಗಿ ಇವರಿಗೆ ಯಾವುದೇ ರೀತಿಯ
ಆಂತರಿಕ ಹಾಗೂ ಬಾಹ್ಯವಾದ ಹೆದರಿಕೆಗಳು ಇರಲಿಲ್ಲ. ನೆಮ್ಮದಿಯ ಬದುಕನ್ನು ಸಾಗಿಸುವಲ್ಲಿ
ಅನುಕೂಲಕರ ಪರಿಸ್ಥಿತಿ ಇದ್ದಿತು. ಅಲ್ಲದೆ, ಇವರು ಶಿಸ್ತಿಗೂ, ಸ್ವಾಮಿನಿಷ್ಠೆಗೂ, ಆದರ್ಶ
ಪ್ರಾಯತನಕ್ಕೂ ಹೆಸರಾದವರು; ಸುವ್ಯವಸ್ಥಿತಿ ಆಡಳಿತ ವ್ಯವಸ್ಥೆಯನ್ನು ಹೊಂದಿದ್ದರು. ಈ
ಅಂಶಗಳ ಹಿನ್ನೆಲೆಯಲ್ಲಿ ಈಶಾನ್ಯ ಕರ್ನಾಟಕದ ಬೇಡ ಪಾಳೆಯಗಾರರು ಕರ್ನಾಟಕದ ಚರಿತ್ರೆಯಲ್ಲಿ
ಪ್ರಮುಖವಾದ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಇವರ ಕುರಿತಾಗಿ ಇನ್ನೂ ಸಮಗ್ರ
ಸಂಶೋದನೆಯ ಅಗತ್ಯವಿದೆ.